ಚಕ್ಕೆ-
ಶಿಲಾಯುಗ ಸಂಸ್ಕøತಿಗಳ ಕಾಲದಲ್ಲಿ ಬಳಕೆಯಲ್ಲಿದ್ದ ಕೆಲವು ರೀತಿಯ ಆಯುಧಗಳನ್ನು ತಯಾರಿಸಲು ಉಪಯೋಗಿಸುತ್ತಿದ್ದ ಕಲ್ಲುಫಲಕ. ಉಂಡೆ ಕಲ್ಲೊಂದರಿಂದ ತೆಗೆದ ಚಕ್ಕೆಗಳ ಅಂಚುಗಳನ್ನು ಚೂಪುಮಾಡಿ ಹೆರೆಯುವ ಆಯುಧ, ಭರ್ಜಿಯ ಮೊನೆ, ಕೊರೆಯುವ ಉಳಿ ಮುಂತಾದ ಆಯುಧಗಳನ್ನು ತಯಾರಿಸಲಾಗುತ್ತಿತ್ತು. ಪೂರ್ವ ಶಿಲಾಯುಗದುದ್ದಕ್ಕೂ ಈ ರೀತಿಯ ಆಯುಧಗಳನ್ನು ತಯಾರಿಸುತ್ತಿದ್ದರೂ ಅದರ ಅಂತ್ಯ ಕಾಲದಲ್ಲಿ ಆಯುಧಗಳನ್ನು ಹೆಚ್ಚಾಗಿ ಉದ್ದವಾಗಿಯೂ ತೆಳುವಾಗಿಯೂ ಸಮಾನಾಂತರ ಅಂಚುಗಳುಳ್ಳವಾಗಿಯೂ ಇದ್ದ ಕಲ್ಲುಚಕ್ಕೆಗಳಿಂದ ಮಾಡಲಾಗುತ್ತಿತ್ತು. ಇಂಥ ಚಕ್ಕೆಗಳನ್ನು ಕೂರಲಗು ಫಲಕಗಳೆಂದು (ಬ್ಲೇಡ್) ಕರೆಯಲಾಗಿದೆ. ಮಧ್ಯ ಶಿಲಾಯುಗ ಸಂಸ್ಕøತಿಗಳಲ್ಲಿ ಬಳಕೆಯಲ್ಲಿದ್ದ ಚಕ್ಕೆಕಲ್ಲಿನ ಆಯುಧಗಳು ಸಣ್ಣವಾಗಿದ್ದುವು. ಅನೇಕ ರೀತಿಯ ಆಯುಧಗಳ ತಯಾರಿಕೆಗೆ ಅವನ್ನು ಬಳಸಲಾಗುತ್ತಿತ್ತು. ಪೂರ್ವ ಶಿಲಾಯುಗ ಸಂಸ್ಕøತಿಯನ್ನು ಯೂರೋಪಿನಲ್ಲಿ ತಿರುಳ್ಗಲ್ಲಿನ ಆಯುಧಗಳ (ಕೋರ್ ಟೂಲ್) ಮತ್ತು ಚಕ್ಕೆಕಲ್ಲಿನ ಆಯುಧಗಳ (ಫ್ಲೇಕ್ ಟೂಲ್) ಸಂಸ್ಕøತಿಗಳೆಂದು ವಿಭಾಗಿಸುವುದುಂಟು. ಚಕ್ಕೆಕಲ್ಲಿನ ಆಯುಧಗಳ ಸಂಸ್ಕøತಿಗಳಲ್ಲಿ ಕ್ಲಾಕ್ಟೋನಿಯನ್, ಲೆವಾಲ್ವಾಸಿಯನ್, ಮಾಸ್ಟೀರಿಯನ್ ಮುಖ್ಯವಾದವು. ಆದರೆ ಆಫ್ರಿಕ ಮತ್ತು ಏಷ್ಯ ಖಂಡಗಳಲ್ಲಿ ಎರಡು ರೀತಿಯ ಸಂಸ್ಕøತಿಗಳು ಒಟ್ಟೊಟ್ಟಿಗೆ ರೂಢಿಯಲ್ಲಿದ್ದುವು. ಆಫ್ರಿಕ ಮತ್ತು ಭಾರತಗಳಲ್ಲಿ ಮಧ್ಯಶಿಲಾಯುಗದಲ್ಲಿ ಬಹುಮಟ್ಟಿಗೆ ಎಲ್ಲ ಆಯುಧಗಳನ್ನೂ ಚಕ್ಕೆಗಳಿಂದಲೇ ತಯಾರಿಸಲಾಗುತ್ತಿತ್ತು.
(ಬಿ.ಕೆ.ಜಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ